ವಾದಿರಾಜ
	1480-1600. ಮಾಧ್ವಯತಿಗಳು. ವಿದ್ವಾಂಸರು ಪ್ರಸಿದ್ಧ ಹರಿದಾಸರು. ಉಡುಪಿ ಬಳಿಯ ಕುಂಭಾಸಿ ಹತ್ತಿರದ ಹೂವಿನಕೆರೆ ಇವರ ಜನ್ಮಸ್ಥಳ. ತಂದೆ ರಾಮಾಚಾರ್ಯ, ತಾಯಿ ಗೌರಮ್ಮ. ಹುಟ್ಟುಹೆಸರು ಭೂವರಾಹ. ಮನೆಯೊಳಗೆ ಜನನವಾದರೆ ಅದು ಮನೆತನಕ್ಕೆ, ಹೊರಗೆ ಹುಟ್ಟಿದರೆ ಆ ಮಗು ಮಠಕ್ಕೆ ಎಂದು ಒಮ್ಮೆ ಒಬ್ಬ ಗುರುಗಳು ಇವರ ತಂದೆತಾಯಿಗಳಿಗೆ ಹೇಳಿದ್ದರಂತೆ. ಒಂದು ಸಾಧನ ದ್ವಾದಶಿಯ ದಿನ ಬೆಳಗ್ಗೆ ಎಲ್ಲರೂ ಗದ್ದೆಯ ಮಧ್ಯದ ಮನೆಯಲ್ಲಿ ಊಟಕ್ಕೆ ಕುಳಿತಿರುವಾಗ, ಬೆಳೆದ ಪೈರು ದನದ ಪಾಲಾಗುವುದನ್ನು ತಪ್ಪಿಸಲು ದಿನ ತುಂಬಿದ ಗರ್ಭಿಣಿಯಾಗಿದ್ದ ಮನೆಯೊಡತಿ (ಇವರ ತಾಯಿ) ಧಾವಿಸಬೇಕಾಗಿ ಬಂದು, ಮರದ ನೆರಳಿನಲ್ಲಿ ಪ್ರಸವವಾಯಿತಂತೆ. ಈ ಸ್ಥಳ ಈಗಲೂ ಗೌರೀಗದ್ದೆ ಎಂದು ಪ್ರಸಿದ್ಧವಾಗಿದೆ. ಆದ್ದರಿಂದ ಇವರು ಬಾಲ್ಯದಲ್ಲೇ ಸನ್ಯಾಸ ಪಡೆದರು. ವಾದಿರಾಜತೀರ್ಥ ಇವರ ಸನ್ಯಾಸಾಶ್ರಮ ನಾಮ. ವಾಗೀಶತೀರ್ಥರು ಇವರ ಗುರು. ವಾದಿರಾಜರು ಮಧ್ವಾಚಾರ್ಯ ಪರಂಪರೆಯ ಅಷ್ಟಮಠಗಳಲ್ಲೊಂದರ ಪೀಠಾಧಿಪತಿಗಳಾದರು. ಸೋದೆಯ (ಶಿರಸಿಯಿಂದ ಸು. 22 ಕಿಮೀ ದೂರ) ಮಠದ ಅಧಿಪತಿಗಳಾಗಿದ್ದು ಅಲ್ಲಿನ ರಾಜ ಅರಸಪ್ಪನಾಯಕನಿಂದ ಗೌರವಾದರಗಳನ್ನು ಪಡೆದರು. ತಮ್ಮ ಬಾಳಿನ ಬಹುಭಾಗವನ್ನು ಅಲ್ಲಿಯೆ ಕಳೆದರು. 

	ವಾದಿರಾಜರು ವಾದದಲ್ಲಿ ಪ್ರವೀಣರಾಗಿದ್ದರೆಂದೂ ಒಮ್ಮೆ ವಾದದಲ್ಲಿ ನಾರಾಯಣಭೂತವೆಂಬ ಬ್ರಹ್ಮರಾಕ್ಷಸನನ್ನು ಸೋಲಿಸಿ ಅದರ ಮೂಲಕ ಅನೇಕ ಅತಿಮಾನುಷ ಕಾರ್ಯಗಳನ್ನು ಮಾಡಿಸಿದರೆಂದು ಹಿಮಾಲಯದ ಬದರಿಕಾಶ್ರಮದಿಂದ ತ್ರಿವಿಕ್ರಮದೇವರನ್ನು ಕಲ್ಲಿನ ರಥ ಸಮೇತ ತಂದು ಸೋದೆಯಲ್ಲಿ ಪ್ರತಿಷ್ಠಾಪಿಸಿದರೆಂದೂ ಹೇಳುತ್ತಾರೆ. ಇವರು ದ್ವೈತಸಿದ್ಧಾಂತ ಪ್ರಚಾರ, ದೀನದಲಿತರ ಉದ್ಧಾರ, ಪಂಡಿತ ಮಂಡಳಿಯ ಸಂರಕ್ಷಣೆ, ಸಂವರ್ಧನೆ, ಸಮಾಜಸುಧಾರಣೆ, ಸದ್ಗ್ರಂಥ ರಚನೆ ಮುಂತಾದ ಕಾರ್ಯಗಳನ್ನು ನಡೆಸಿದ್ದಾರೆ. ಈಗ ಪ್ರಸಿದ್ಧವಾಗಿರುವ ಧರ್ಮಸ್ಥಳದ ಮಂಜುನಾಥಸ್ವಾಮಿಯನ್ನು ಕದ್ರಿಯಿಂದ ತಂದು ಅಲ್ಲಿ ಪ್ರತಿಷ್ಠಾಪಿಸಿದವರು ವಾದಿರಾಜರೇ. ಉಡುಪಿಯ ದ್ವೈವಾರ್ಷಿಕ ಸಮಾರಂಭ ಪರ್ಯಾಯೋತ್ಸವ ವನ್ನು ವ್ಯವಸ್ಥೆಗೊಳಿಸಿದವರೂ ಇವರೇ.
	
ಇವರು ಯುಕ್ತಿಮಲ್ಲಿಕಾ ಗುರ್ವರ್ಥದೀಪಿಕಾ, ಶ್ರುತ್ಯರ್ಥಪ್ರಕಾಶಿಕೆ, ತಾತ್ಪರ್ಯ ನಿರ್ಣಯ ಟೀಕೆ. ಉಪನ್ಯಾಸಭಾರತೀ, ಸರಸಭಾರತೀವಿಲಾಸ, ತೀರ್ಥಪ್ರಬಂಧ ಮುಂತಾದ ಹದಿನಾರು ಸಂಸ್ಕøತ ಗ್ರಂಥಗಳನ್ನು ರಚಿಸಿ ದ್ದಾರೆ. ಹಯವದನ ಮುದ್ರಿಕೆಯಲ್ಲಿ ಅನೇಕ ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ವೈಕುಂಠವರ್ಣನೆ, ಲಕ್ಷ್ಮೀಶೋಭಾನೆ, ಗುಂಡಕ್ರಿಯೆ, ಸ್ವಪ್ನಗದ್ಯ, ಮಧ್ವಸುವಾಲಿ, ಭ್ರಮರಗೀತೆ, ಕೀಚಕವಧೆ-ಇವು ಇವರ ಕನ್ನಡ ಕೃತಿಗಳು. ಇವರ ಎಲ್ಲ ಗ್ರಂಥಗಳಲ್ಲಿ ಹಾಗೂ ಕೀರ್ತನೆಗಳಲ್ಲಿ ಮಧ್ಯಮತದ ತತ್ತ್ವಗಳು ಪ್ರತಿಪಾದಿತವಾಗಿವೆ. 

	ಇವರು ಶಾಸ್ತ್ರೀಯ ವಾಙ್ಮಯವನ್ನು ಸಾಹಿತ್ಯ ಶೈಲಿಯಲ್ಲಿ ರಚಿಸಿದ್ದಾರೆ. ರುಕ್ಮಿಣೀಶವಿಜಯ ಇವರ ಕಾವ್ಯರಚನಾಕೌಶಲ್ಯಕ್ಕೆ ಹಿರಿದಾದ ಸಾಕ್ಷಿಯಾಗಿದೆ. ತಮ್ಮ ವಾಗ್ವೈಖರಿ, ರಚನಾಕೌಶಲ್ಯ, ಯುಕ್ತಿಚಾತುರ್ಯ, ವಿಷಯವಿನ್ಯಾಸ ನೈಪುಣ್ಯ, ಅಗಾಧ ಪಾಂಡಿತ್ಯ ಇವುಗಳಿಂದ ಶಾಸ್ತ್ರಸಾಹಿತ್ಯ ರಂಗದಲ್ಲಿ ಇವರು ತಮ್ಮದೇ ಆದ ವಾದಿರಾಜವೀಧಿಯನ್ನೇ ನಿರ್ಮಿಸಿದ್ದಾರೆ. ಉಡುಪಿಯ ಅಷ್ಟಮಠಗಳ ಯತಿಗಳಲ್ಲಿ ಕನ್ನಡ ಕೃತಿಗಳನ್ನು ರಚಿಸಿದವರಲ್ಲಿ ಇವರು ಮೊದಲಿಗರು. ಇವರ ಲಕ್ಷೋಮಿನಾರಾಯಣ ಎಂಬ ಹಾಡನ್ನು ನೃತ್ಯಕ್ಕೆ ಅಳವಡಿಸಿ ಈಗಲೂ ಅಷ್ಟಮಠಗಳಲ್ಲಿ ರಾತ್ರಿ ಪೂಜಾಕಾಲದಲ್ಲಿ ಹಾಡುವುದುಂಟು.

	ವಾದಿರಾಜರು ಜ್ಯೋತಿಷದ ಹೇಳಿಕೆಯ ಪ್ರಕಾರ 120 ವರ್ಷ ಪೂರ್ಣಾಯಸ್ಸು ಪಡೆದು ಅರವತ್ತನಾಲ್ಕೂ ವಿದ್ಯೆಗಳಲ್ಲಿ ಪರಿಣತರಾಗಿ ಸಾರ್ಥಕ ಜೀವನವನ್ನು ನಡೆಸಿದವರು. ಇವರ ವೃಂದಾವನ ಸೋದೆಯಲ್ಲಿದ್ದು ಇದೊಂದು ಯಾತ್ರಾಸ್ಥಳವಾಗಿದೆ.	
												(ಕೆ.ಎಮ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ